ನನ್ನಾಕೆ

ಸೂರ್ಯ ಚಂದ್ರ ಚುಕ್ಕೆಗಳ
ಬಿಳುಪಿನ ಹೊಳಪಿನ
ಒಟ್ಟು ಮೊತ್ತ
ನನ್ನಾಕೆಯ ಮುಂದೆ ನಿವಾಳಿಸಿ
ಎಸೆಯಲೆತ್ತ.!!

ಸಿಹಿಯ ಹುಡುಕಿ
ಹೊರಟ ಇರುವೆ
ಮರೆತು ಹುತ್ತ,
ಮೆತ್ತುತಿರಲು ನನ್ನಾಕೆಯ
ತುಟಿಯ ಸುತ್ತ.!!

ನನ್ನಾಕೆಯ ಕಂಗಳಲಿ
ನಾನು ಸದಾ
ಪಾನಮತ್ತ,
ತಪ್ಪುತಿರಲು ಎದೆಬಡಿತ,
ಇನ್ನು ಮುಂದಾಗುವುದೆಲ್ಲಾ
ದೈವ ಚಿತ್ತ !!

— ಸುಕನ್ಯಾತನಯ

ಜುಲೈ ೧, ೨೦೧೫

ಅಮೇರಿಕಾನುಭವ: Parenting

ತಮ್ಮ ಮಕ್ಕಳು ನಂಬರ್ ಒನ್ ಆಗಬೇಕೆಂಬ ಸದಭಿಲಾಷೆಯಿಂದ ಬಹುತೇಕ ಬಾರಿ ಮಕ್ಕಳ ಊಟ, ಆಟ, ಓದು, ಹವ್ಯಾಸ, ಬೇಕು – ಬೇಡ ಇತ್ಯಾದಿಗಳನ್ನು ಪೋಷಕರೇ ನಿರ್ಧರಿಸಿಬಿಟ್ಟಿರುತ್ತಾರೆ. ತಮ್ಮ ಇಷ್ಟಗಳನ್ನು ತಾವೇ ಆಯ್ದುಕೊಳ್ಳುವ ಅವಕಾಶ ಬಹುತೇಕ ಪೋಷಕರು ಮಕ್ಕಳಿಗೆ ಕೊಟ್ಟಿರುವುದಿಲ್ಲ. ಈ ವಿಷಯದಲ್ಲಿ ಅಮೇರಿಕಾ ದೇಶದ ಮಕ್ಕಳು ಬಹಳ ಪುಣ್ಯವಂತರು. ಅವರ ಆಯ್ಕೆಗಳನ್ನು ಪೋಷಕರು ಸಮಾಧಾನದಿಂದ ಚರ್ಚಿಸಿ ನಯವಾಗಿ ನಿರಾಕಸಿರಬಹುದೇ ವಿನಃ ಖಡಾಖಂಡಿತವಾಗಿ ತಿರಸ್ಕರಿಸುವಂತಿಲ್ಲ. ಜೋರು ಮಾಡುವಂತಿಲ್ಲ. ಕೈ ಮಾಡುವುದಂತೂ ಒಂದು ಘೋರ ಅಪರಾಧ. ಬಾಯಿ ತಪ್ಪಿಯೂ ಮಕ್ಕಳು, ಶಾಲೆಯಲ್ಲಿ ಟೀಚರುಗಳ ಮುಂದೆಯೋ ಅಥವಾ ಇನ್ನೆಲ್ಲಿಯೋ ತಮ್ಮ ಮನೆಯಲ್ಲಿ ಹೀಗಾಯಿತು ಎಂದು ಬಾಯಿ ಬಿಟ್ಟರೆ, ಪೋಷಕರ ಕಥೆ ಮುಗಿಯಿತು ಎಂತಲೇ ಅರ್ಥ. ಸಂಬಂಧಪಟ್ಟ ಅಧಿಕಾರಿಗಳಿಂದ ನಿಯಮಿತವಾಗಿ ವಿಚಾರಣೆ, ಮೇಲ್ವಿಚಾರಣೆಗಳು ನಡೆಯುತ್ತವೆ. ಕಾನೂನಿನ ಸಕಲ ಕಲಮ್ಮುಗಳು ಅವರ ಕೊರಳಿಗೆ ಅಂಟಿಕೊಳ್ಳುತ್ತವೆ.

ರಚ್ಚೆ ಹಿಡಿದ ಮಗುವನ್ನು, ರಮಿಸುವುದು, ಸಂತೈಸುವುದು, ಗದರಿಸುವುದು, ಹೆದರಿಸುವುದು, ಎಲ್ಲವೂ ಮುಗಿದು ಇನ್ನೂ ಬಾಕಿ ಇದ್ದರೆ ಕಡೆಗೆ ಒಂದೆರಡು ಪೆಟ್ಟು ಕೊಡುವುದು ಸಾಮಾನ್ಯವಾಗಿ ನಮ್ಮಲ್ಲಿ ರೂಢಿಯಲ್ಲಿದೆ. ಕೆಲವೊಮ್ಮೆ ಒಂದೆರಡು ಬಾರಿಸಿಯೇ ತಮ್ಮ ಮಕ್ಕಳನ್ನು ಸಮಾಧಾನ ಮಾಡುವ ಕೆಲಸ ಶುರು ಮಾಡುವ ಪೋಷಕರನ್ನೂ ನೋಡಿದ್ದೇನೆ. ಆದರೆ ಇಲ್ಲಿ ಬೇರೆಯೇ ಕಥೆ. ಇದೇ ಕುರಿತು ನನ್ನ ಭಾರತೀಯ ಸಹೋದ್ಯೋಗಿಯೊಬ್ಬ ಹೇಳುತ್ತಿದ್ದ, ಅವರ ಮಗ ಇಷ್ಟಪಟ್ಟಿದ್ದ ಲೆಗೋ ಎಂಬ ಆಟಿಕೆ ಇವರು ತಂದುಕೊಡಲಾಗುವುದಿಲ್ಲ ಎಂದು ಜೋರು ಮಾಡಿ ಹೇಳಿದ್ದಕ್ಕೆ, ಅವರ 6 ವರ್ಷದ ಮಗ – Dad, you are hurting my feelings !! (ನೀವು ನನ್ನ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದೀರ) ಎಂದು ಕೋಪಿಸಿಕೊಂಡನಂತೆ. ಅಪ್ಪ ಸೈಲೆಂಟು!!! ಇನ್ನೊಬ್ಬ ಭಾರತೀಯ ಸಹೋದ್ಯೋಗಿ, ಹೆಚ್ಚು ಹೊತ್ತು ಟಿವಿ ನೋಡಲು ತಮ್ಮ ಮಗನಿಗೆ ಅವಕಾಶ ನೀಡದಿದ್ದುದಕ್ಕೆ ಅವರ 7 ವರ್ಷದ ಮಗ, Life is a hard stone man !! (ಜೀವನ ಬೆಟ್ಟದಷ್ಟು ಕಷ್ಟವಿದೆ ಎಂಬಂತೆ) ಗೊಣಗಿದನಂತೆ !!. ಮಕ್ಕಳ ಪಾಲನೆ ಬಹು ಸವಾಲಿನದ್ದು ಎಂಬುದು ಅವರಿಬ್ಬರ ಅಂಬೋಣ. ಇರಬಹುದೇನೋಪಾ.

ಇದೆಲ್ಲವನ್ನೂ ಕೇಳುತ್ತ ನಾನು Flashback ಗೆ ತೆರಳಿ, ಚಿಕ್ಕವನಾಗಿದ್ದಾಗ ಕಲಬುರ್ಗಿಯ ಬಿರುಬೇಸಿಗೆಯ ಮಟಮಟ ಮಧ್ಯಾಹ್ನ ನಾನು ಗೋಲಿ ಆಡಲು ಹೋಗುತ್ತೇನೆ ಎಂದಿದ್ದನ್ನು ಅಪ್ಪ ಬೇಡ ಎಂದಾಗ ನಾನೂ, “ಅಪ್ಪ You are hurting my feelings !!” ಎಂದಂದುಬಿಟ್ಟಿದ್ದರೆ??? , ಫೀಲಿಂಗ್ಸು ಪಕ್ಕಕ್ಕಿರಲಿ, ಅಪ್ಪನ ಒದೆತಕ್ಕೆ ನನ್ನ ಅಂಡೆ ಹರ್ಟ್ ಆಗುತ್ತಿತ್ತೇನೋ ಎಂದುಕೊಂಡೆ 🙂

ಬೇಕೊಂದು ದೀಪಾವಳಿ

IMG_4565

ಮೈಗೆ ಸವರಿದ ಎಣ್ಣೆ
ಮಿರಿಮಿರಿಮಿರಿ ಮಿಂಚುತಿದೆ
ಬಿಸಿನೀರಿನ ಹಿತಸ್ನಾನಕೆ
ದೇಹವು ಅಣಿಯಾಗುತಿದೆ

ಕಟ್ಟೆಯ ಮೇಲಿಟ್ಟಿರುವ
ಅಮ್ಮನ ಆರತಿ ತಟ್ಟೆ
ಮುಟ್ಟಿ ಮುಟ್ಟಿ ಸಂಭ್ರಮದಿ
ನೋಡುತಿರೆ ಹೊಸಬಟ್ಟೆ

ಪಡಸಾಲೆಯ ರಂಗವಲ್ಲಿ
ಕಣ್ಣಲ್ಲೇ ಮೆರೆಯುತಿದೆ
ಮೈಸೂರ್ ಪಾಕಿನ ಘಮವು
ಕೈಬೀಸಿ ಕರೆಯುತಿದೆ

ಸುರುಸುರು ಎನ್ನುತ ಬತ್ತಿ
ಠುಸ್ ಪಟಾಕಿ ಸುಡುತಿರುವುದು
ಸುರುಳಿಚಕ್ರ ತಿರುಗುತಿರೆ
ಹೂಪಟಾಕಿ ಬುಸುಗುಡುವುದು

ಬೆಳಕಿನ ಜಾತ್ರೆಯಿದು
ದೀಪಗಳ ಮೆರವಣಿಗೆ
ಕಳೆಯುತಲಿ ಕತ್ತಲೆಯ
ಅರಳುವುದು ಮನಮಲ್ಲಿಗೆ

ಬಡಿದೋಡಿಸುತಜ್ಞಾನವ
ಸಹಜೀವನ ದೃಶ್ಯಾವಳಿ
ಜನಜನಕೆ ಮನಮನಕೆ
ಬೇಕೊಂದು ದೀಪಾವಳಿ

— ಸುಕನ್ಯಾತನಯ

೧೮.೧೦.೨೦೧೪

ಸ್ವಾತಂತ್ರ್ಯೋತ್ಸವ ಬೇಕಿದೆ

Capture1

ಸ್ವಾತಂತ್ರ್ಯೋತ್ಸವ ಬೇಕಿದೆ
ಸೂರ್ಯನಿಗೂ ಮುಂಚೆ ಎದ್ದು
ತರಾತರಿಯಲ್ಲಿ ತಯಾರಾಗಿ
ಉಜಾಲಾದ ಕಡುನೀಲಿಯಲ್ಲಿ ಮುಳುಗೆದ್ದಿದ್ದ
ಬಿಳಿ ಅಂಗಿ ಚಡ್ಡಿ,
ರಾತ್ರಿ ಶುಭ್ರವಾಗಿ ತೊಳೆದು
ಬಣ್ಣಬಳಿದಿಟ್ಟ ಬಿಳಿ ಶೂ ಧರಿಸಲು

ಸ್ವಾತಂತ್ರ್ಯೋತ್ಸವ ಬೇಕಿದೆ
ಒಂದೇ ಓಟದಲಿ ಶಾಲೆ ತಲುಪಿ
ಧ್ವಜಾರೋಹಣೆಯ ಪೂರ್ವಸಿದ್ಧತೆಗಳು ನಡೆಯುತಿರೆ
ಮಹಾತ್ಮರ ಫೋಟೋಗಳನು ಸ್ವಚ್ಚಗೊಳಿಸಿ
ಮಡಚಿಟ್ಟಿದ್ದ ತ್ರಿವರ್ಣ ಧ್ವಜವನ್ನು
ಯಾರೊಬ್ಬರೋ ‘ಅತಿಥಿ’ ಹಾರಿಸುವ ಮೊದಲು
ಪ್ರೀತಿಯಿಂದೊಮ್ಮೆ ನೇವರಿಸಲು

ಸ್ವಾತಂತ್ರ್ಯೋತ್ಸವ ಬೇಕಿದೆ
ಅಲ್ಲಲ್ಲಿ ಬೂದಿಯಿಂದೆಳೆದ ಗೆರೆಗಳು
ಬಣ್ಣಬಣ್ಣದ ಹೂ, ಪೇಪರಿನ ಅಲಂಕಾರಗಳು
ಟೀಚರ್ರುಗಳ ಚಿತ್ತಾರದ ರಂಗವಲ್ಲಿಗಳು
ಹಿನ್ನೆಲೆಯಲ್ಲಿ ‘ವಂದೇಮಾತರಂ….’, ‘ವಿಶ್ವವಿನೂತನ….’ಗಳು
ನಿರೀಕ್ಷೆಯ ಕ್ಷಣಗಣನೆಯ
ರೋಮಾಂಚನವನ್ನು ಹೆಚ್ಚಿಸಲು

ಸ್ವಾತಂತ್ರ್ಯೋತ್ಸವ ಬೇಕಿದೆ
‘ಸಿಪಾಯಿದಂಗೆ’, ‘ಭಾರತ ಬಿಟ್ಟು ತೊಲಗಿ’,
‘ನಡು ರಾತ್ರಿಯ ಸ್ವಾತಂತ್ರ್ಯ’ದ
ತ್ಯಾಗಬಲಿದಾನಗಳ ಕಥೆಯನ್ನು
ಪುನಃ ಕೇಳಿ, ಪುಳಕಿತನಾಗಿ,
ಕಂಬದ ತುದಿಯನ್ನು ದಿಟ್ಟಿಸುತಾ
ನಾನು ಭಾರತೀಯನೆಂದು ಹೆಮ್ಮೆ ಪಡಲು

ಸ್ವಾತಂತ್ರ್ಯೋತ್ಸವ ಬೇಕಿದೆ
ತಡವಾಗಿ ಬಂದ ಅತಿಥಿ
ಆತುರವಾಗಿಯಾದರೂ ಗೌರವ ಸ್ವೀಕರಿಸಿ
ತನ್ನ ‘ಜನ್ಮ ಸಿದ್ಧ ಹಕ್ಕು’ ಎಂಬಂತೆ
ಹಗ್ಗ ಎಳೆದು, ಧ್ವಜ ಹಾರಿಸಿದಾಗ, ಅತ್ತಲೇ ದೃಷ್ಟಿ ನೆಟ್ಟು
ಹಿಮ್ಮೇಳದೊಂದಿಗೆ ‘ಜನ ಗಣ ಮನ…..’ವನ್ನು
ಎದೆಯುಬ್ಬಿಸಿ ಹಾಡಲು

ಸ್ವಾತಂತ್ರ್ಯೋತ್ಸವ ಬೇಕಿದೆ
ಕೊಟ್ಟ ಪೆಪ್ಪರ್ಮಿಂಟನ್ನು ಜೇಬಿಗಿರಿಸಿ
ಶಿಸ್ತಿನ ಸಿಪಾಯಿಯಂತೆ ಸಡಗರದಿ
ಊರೆಲ್ಲ ಪ್ರಭಾತ್ ಫೇರಿ ಹೊರಟು
ದಾರಿಯಲ್ಲಿ ಯಾರೋ ‘ದಾನಿ’ಗಳು ನೀಡಿದ
‘ರಸ್ನಾ’ವನ್ನು ಕುಡಿದು ನಿರಂತರ
ಕವಾಯತಿನ ದಣಿವನ್ನು ನೀಗಿಸಿಕೊಳ್ಳಲು

ಸ್ವಾತಂತ್ರ್ಯೋತ್ಸವ ಬೇಕಿದೆ
ಏನೋ ಸಾಧಿಸಿದಂತೆ ಮನೆಗೆ ಬಂದು
ಕಿಸೆಯಲ್ಲಿದ್ದ ಪೆಪ್ಪರ್ಮಿಂಟ್, ಚಾಕೋಲೇಟುಗಳು
ಪುಟ್ಟನೆಯ ಬಾವುಟಗಳನ್ನು
ಅಪ್ಪ ಅಮ್ಮನಿಗೆ ಹಲ್ಕಿರಿದು ತೋರಿಸಿ,
ಅಲ್ಲಿಂದ ಕಾಲ್ಕಿತ್ತು, ಅದೇ ಬಿಳಿ ಅಂಗಿ ಚಡ್ಡಿ
ಕೊಳಕಾಗುವವರೆಗೆ ಆಟವಾಡಲು

— ಸುಕನ್ಯಾತನಯ
೧೫.೮.೨೦೧೪

ಜಾತ್ರಿಗಿ ಹೋಗೋಣು

ಗಂಗೀ ಗಂಗೀ…..
ಗಂಗೀ ಗಂಗೀ ಗಂಗೀ
ಹೊಲಿಸು ನನಗೊಂದ ಅಂಗಿ
ಮಡಿವಾಳ ಮುತ್ಯಾನ ಜಾತ್ರಿ ಬಂದssದ ಗಂಗಿ

ತೇರ ಎಳೀತಾರ
ತೇರಿಗಿ ಬಣ್ಣ ಹಚ್ಚತಾರ
ಮಿರ ಮಿರ ಮಿಂಚೋ ಅಂಗಿ ತೊಟ್ಟು ಎಳೀತೀನಿ ತೇರ

ಮಂದಿ ಸೇರತಾರ
ಬಾಳೆಹಣ್ಣ ಬೀಸುತಾರ
ಬೀಸಿದ ಹಣ್ಣು ಕೈಗೆ ಸಿಕ್ರ ಪುಣ್ಯ ಅನ್ನತಾರ

ಅಗ್ಗಿ ತುಳೀತಾರ
ಮೈಯಾಗ ದೇವ್ರು ಕುಣೀತಾರ
ಅರಿಶಿಣ ಕುಂಕುಮ ಹೂವ ಭಸ್ಮ ಎಲ್ಲ ಸುರೀತಾರ

ಪೀಪಿ ಊದಬೇಕ
ಚಕ್ರದ ಆಟ ಆಡಬೇಕ
ಜಂಬೂ ಸರ್ಕಸ್, ಜಾದೂ ಕನ್ನಡಿ ಎಲ್ಲ ನೋಡಬೇಕ

ಮಿಟಾಯಿ ತಿನ್ನೋಣು
ಲಿಂಬುಸೋಡಾ ಕುಡಿಯೋಣು
ಐಸ್ಕ್ರೀಮ್, ಬತಾಸು, ಪಾನಿಪೂರಿ ಎಲ್ಲ ಸವಿಯೋಣು

ಟೊಪ್ಪಿ ಇಟಗೊತೀನಿ
ಕೆಂಪು ಚಸ್ಮಾ ಹಾಕ್ಕೊತೀನಿ
ಹಸೀರ ಬಳಿ, ಗೆಜ್ಜಿ, ಝುಮಕಿ ನಿನಗ ಕೊಡುಸತೀನಿ

ತಯಾರಾಗು ಸಿಸ್ತ
ಮಾಡೋಣ ಮಜಾ ಮಸ್ತ ಮಸ್ತ
ಊರಿನ ಮಂದಿ ನಮಗ ನೋಡಿ ಆಗಬೇಕು ಸುಸ್ತ

— ಸುಕನ್ಯಾತನಯ

ಮಾಲ್ಗುಡಿ ಡೇಸ್

ಮಾಲ್ಗುಡಿ ಡೇಸ್
***************
ಶಂಕರ್ ನಾಗ್ ಎಂದೊಡನೆ ಕನ್ನಡಿಗರ ಮೈ ಮನಗಳಲ್ಲಿ ರೋಮಾಂಚನ ಉಂಟಾಗುತ್ತದೆ. ಬದುಕಿನ ‘ಮಿಂಚಿನ ಓಟ’ದಲ್ಲಿ ಅವರು ಸಾಧಿಸಿದ್ದು, ಸಾಧಿಸುವ ಕನಸು ಕಂಡಿದ್ದು ಎಲ್ಲವೂ ಒಂದು ವಿಸ್ಮಯ. ಅಂತಹ ಮಹಾನ್ ಕಲಾವಿದನ ಶ್ರೇಷ್ಠ ಕೃತಿಗಳಲ್ಲೊಂದು ‘ಮಾಲ್ಗುಡಿ ಡೇಸ್’.

‘ಮಾಲ್ಗುಡಿ ಡೇಸ್’ ಕನ್ನಡದ ಹಲವು ಮತ್ತು ಭಾರತದ ಇತರೆ ಶ್ರೇಷ್ಠ ಕಲಾವಿದರುಗಳ ಅಪೂರ್ವ ಸಮಾಗಮದಲ್ಲಿ ಹೊರಬಂದ ಮೇರು ಕೃತಿ ಎಂದೇ ಹೇಳಬಹುದು. ಮೂಲತಹ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನದಿಂದ, ಶಂಕರ್ ನಾಗ್ ರ ನಿರ್ದೇಶನದಲ್ಲಿ ಧಾರಾವಾಹಿಯಾದ ‘ಮಾಲ್ಗುಡಿ ಡೇಸ್’ನ ಜನಪ್ರಿಯತೆ ಅಂದಿನ ದಿನಗಳಲ್ಲಿ ಎಷ್ಟರಮಟ್ಟಿಗೆ ಇತ್ತು ಎಂದರೆ ದೇಶದ ಪ್ರತಿಯೊಂದು ಭಾಷೆಗೂ ಧಾರಾವಾಹಿಯನ್ನು ಅನುವಾದಿಸಿ (ಡಬ್ಬಿಂಗ್) ಬಿತ್ತರಿಸಲಾಗಿತ್ತು. ಈಗಲೂ ಯಾವುದೋ ವಾಹಿನಿಯಲ್ಲಿ ಆಗಾಗ್ಗೆ ‘ಮಾಲ್ಗುಡಿ ಡೇಸ್’ ಮರುಪ್ರಸಾರವಾಗುವುದುಂಟು.

ಆಗುಂಬೆಯಲ್ಲಿ ಕೃತಕ ಹಳ್ಳಿ ಮಾಲ್ಗುಡಿಯನ್ನು ಸೃಷ್ಟಿಸಿ, ಕನ್ನಡಿಗರೇ ನಿರ್ಮಿಸಿ, ನಿರ್ದೇಶಿಸಿ, ಕನ್ನಡದ ಘಟಾನುಘಟಿ ಕಲಾವಿದರುಗಳಿದ್ದೂ, ಕನ್ನಡದ ಪ್ರೇಕ್ಷಕನಿಗೆ, ಕಲಾರಸಿಕನಿಗೆ ಈ ಧಾರಾವಾಹಿ ಸರಣಿಯ ಅನುಭವ ಕನ್ನಡದಲ್ಲಿ ಸವಿಯಲಾಗದಿದ್ದುದು ಒಂದು ದೊಡ್ಡ ವಿಪರ್ಯಾಸವೇ ಸರಿ. ಬಹುಷಃ ಕನ್ನಡದ ‘ಡಬ್ಬಿಂಗ್ ನಿಷೇಧ’ ನಿಲುವಿನಿಂದಾಗಿ ಆ ಅವಕಾಶ ಕೈ ತಪ್ಪಿತು.

ಅಂದಿನ ದಿನಗಳಲ್ಲಿ ಚಂದಮಾಮ, ದಿನಕ್ಕೊಂದು ಮಕ್ಕಳ ಕಥೆಗಳು, ಕಥಾ ಚರಿತ ಸಾಗರ, ಅರೇಬಿಯನ್ ನೈಟ್ಸ್, ನಂತಹ ಕಥೆಗಳ ಕುತೂಹಲ ಲೋಕದಲ್ಲಿ ವಿಹರಿಸುತ್ತಿದ್ದ ನಮಗೆ ‘ಮಾಲ್ಗುಡಿ ಡೇಸ್’ ಒಂದು ಅದ್ಭುತ ಪ್ರಪಂಚವಾಗಿತ್ತು. ಆವಾಗ ಹಿಂದಿ ಅಂದು ಅಷ್ಟೊಂದು ಅರ್ಥವಾಗದಿದ್ದರೂ ಕಥೆಗೋಸ್ಕರವೇ ಧಾರಾವಾಹಿ ನೋಡುತ್ತಿದ್ದೆವು. ‘ಸ್ವಾಮಿ ಮತ್ತವನ ಗೆಳೆಯರು’ ನಾವೇ ಆಗಿಬಿಟ್ಟಿದ್ದೆವು. ಈಗಲೂ ಮಾಲ್ಗುಡಿಯ ಶೀರ್ಷಿಕೆ ಗೀತೆ ಮೊಬೈಲಲ್ಲೋ, ಟಿವಿನಲ್ಲೋ ಕೇಳುವಾಗ ತಕ್ಷಣಕ್ಕೆ ಕಿವಿ ನಿಮಿರುತ್ತದೆ, ಆ ಧ್ವನಿ ನಮ್ಮನ್ನು ಎಂಥದ್ದೋ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ತ ನ ನ ತ ನ ನ ನ ನ…….. ತ ನ ನ ತ ನ ನ ನ ನ